ಕೇವಲ ಜ್ಞಾನ		

ಜೈನಸಿದ್ಧಾಂತ ರೀತ್ಯ ಐದು ಬಗೆಯ ಜ್ಞಾನಗಳಲ್ಲಿ ಒಂದು; ಕೊನೆಯದು. ಮತಿ, ಶ್ರಾತ, ಅವಧಿ, ಮನಃಪರ್ಯಾಯ- ಇವು ಕ್ರಮವಾಗಿ ಉಳಿದ ನಾಲ್ಕು. ಇಂದ್ರಿಯಜನ್ಯ ಜ್ಞಾನ ಮತಿಜ್ಞಾನ. ಇದರ ಆಧಾರದಿಂದಲೇ ಶ್ರುತಜ್ಞಾನ ಉಂಟಾಗುತ್ತದೆ. ಉಳಿದ ಮೂರು ಜ್ಞಾನಗಳು ಅತೀಂದ್ರಿಯ. ಅವುಗಳಲ್ಲಿ ಶ್ರೇಷ್ಠವಾದುದು ಕೇವಲ ಜ್ಞಾನ. ಜ್ಞಾನವನ್ನು ಮುಚ್ಚುವ ಜ್ಞಾನಾವರಣಾದಿಘಾತಿಕರ್ಮಗಳು ನಷ್ಟವಾದಾಗ ಆತ್ಮನಲ್ಲಿ ಕೇವಲಜ್ಞಾನದ ವಿಕಾಸವಾಗುತ್ತದೆ. ಇದರಿಂದ ಆತ್ಮನಿಗೆ ಎಲ್ಲ ಸ್ಥಳದ, ಎಲ್ಲ ಕಾಲದ, ಎಲ್ಲ ವಸ್ತು ವಿಚಾರಗಳ ಜ್ಞಾನ ಒಟ್ಟಿಗೆ ಪ್ರಾಪ್ತವಾಗುತ್ತದೆ. ಈ ಜ್ಞಾನ ಸರ್ವಥಾ ಸಂಪೂರ್ಣ, ನಿರ್ದೋಷ, ಅಖಂಡ ಮತ್ತು ನಿತ್ಯವಾಗಿದ್ದು ಆತ್ಮನ ಆದರ್ಶ ವಿಕಾಸದ ಲಕ್ಷಣವಾಗಿದೆ. ಇದು ಆತ್ಮನಲ್ಲಿ ವಿಕಸಿತವಾದ ಮೇಲೆ ಉಳಿದ ಜ್ಞಾನಗಳಿಗೆ ಆಸ್ಪದವಿಲ್ಲ. ಕೇವಲಜ್ಞಾನದ ಮೂಲಕವೇ ಸರ್ವಜ್ಞತ್ವ. ಇದನ್ನು ಪಡೆದವ ಕೇವಲಿ ಎನಿಸುವನು. 
 (ನೋಡಿ- ಕೇವಲಿ)       								
(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ